ಇಬ್ಬರು ಅನ್ಕ್ಯಾಪ್ಡ್ ಆಟಗಾರರಿಗೆ ಸಿಎಸ್ಕೆ 28.4 ಕೋಟಿಗೆ ನೀಡಿ ಖರೀದಿಸಿದ್ದೇಕೆ?
ಚೆನ್ನೈ ಸೂಪರ್ ಕಿಂಗ್ಸ್ (CSK) ಮಂಗಳವಾರ ನಡೆದ ಮಿನಿ ಹರಾಜಿನಲ್ಲಿ ಅನ್ಕ್ಯಾಪ್ಡ್ ಆಟಗಾರರಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾ (Prashant Veer and Karthik Sharma) ಅನ್ನು ತಲಾ ರೂ. 14.20 ಕೋಟಿಗೆ ಖರೀದಿಸಿ ದಾಖಲೆ ಬರೆದಿದೆ.
43 ಕೋಟಿ ಬಜೆಟ್ನಲ್ಲಿ ಈ ಇಬ್ಬರಿಗೆ 28.4 ಕೋಟಿ ವಿನಿಯೋಗಿಸಿದ್ದು, ಕ್ರಿಕೆಟ್ ಲೋಕವನ್ನೆ ಬೆಕ್ಕಸ ಬೆರಗಾಗಿಸಿದೆ. ಈ ಮೊತ್ತ ಐಪಿಎಲ್ ಹರಾಜಿನ ಇತಿಹಾಸದಲ್ಲಿ ಅನ್ಕ್ಯಾಪ್ಡ್ ಆಟಗಾರರಿಗೆ ನೀಡಿದ ಅತಿ ಹೆಚ್ಚು ಬೆಲೆಯಾಗಿದೆ.
ಕಳೆದ ಆವೃತ್ತಿಯಲ್ಲಿ ಸಿಎಸ್ಕೆ ಕೊನೆಯ ಸ್ಥಾನ ಪಡೆದಿದ್ದರಿಂದ ಈ ಬಾರಿ ಅನುಭವಿ ಆಟಗಾರರಿಗೆ ಮೊರೆ ಹೋಗಬಹುದು ಎಂದು ನಿರೀಕ್ಷಿಸಲಾಗಿತ್ತು.
ಆದರೆ ಯುವ ಆಟಗಾರರಿಗೆ ಬಹುತೇಕ ಹಣ ಖರ್ಚು ಮಾಡಿದ್ದಕ್ಕೆ ಅಚ್ಚರಿ ವ್ಯಕ್ತವಾಗಿತ್ತು. ಈ ಬಗ್ಗೆ ತಂಡದ ಸಿಇಓ ಕಾಸಿ ವಿಶ್ವನಾಥನ್ ಸ್ಪಷ್ಟನೆ ನೀಡಿದ್ದಾರೆ.
ಜಡೇಜಾ ಸ್ಥಾನಕ್ಕೆ ಪ್ರಶಾಂತ್ ವೀರ್
ಸಿಎಸ್ಕೆ ಮೊದಲು 20 ವರ್ಷಗಳ ಯುವ ಆಲ್ರೌಂಡರ್ ಉತ್ತರ ಪ್ರದೇಶದ ಎಡಗೈ ಸ್ಪಿನ್ ಆಲ್-ರೌಂಡರ್ರನ್ನ 14.2 ಕೋಟಿ ಬಿಡ್ ಮಾಡಿ ಖರೀದಿಸಿತು.
ತಂಡದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪರ್ಮನೆಂಟ್ ಆಲ್ರೌಂಡರ್ ಆಗಿದ್ದ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನ್ ರಾಯಲ್ಸ್ಗೆ ಟ್ರೇಡ್ ಮಾಡಿದೆ.
ಹಾಗಾಗಿ ನಂಬರ್ 7ನೇ ಸ್ಥಾನಕ್ಕೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುವ ಆಟಗಾರ ಬೇಕಿತ್ತು. ಅದಕ್ಕಾಗಿ ಪ್ರಶಾಂತ್ರನ್ನ ಖರೀದಿ ಮಾಡಿದ್ದಾಗಿ ಸಿಎಸ್ಕೆ ಸಿಇಒ ತಿಳಿಸಿದ್ದಾರೆ.
” ಪ್ರಶಾಂತ್ ವೀರ್ ಹೊಸ ಆಟಗಾರ. ನಾವು ಜಡ್ಡು (ಜಡೇಜಾ) ಅನ್ನು RRಗೆ ಟ್ರೇಡ್ ಮಾಡಿದ್ದೇವೆ. ಹಾಗಾಗಿ ನಮಗೆ ನಂಬರ್ 7ಕ್ಕೆ ಬ್ಯಾಟ್ ಮಾಡುವ, ಬೌಲ್ ಮಾಡುವ ಮತ್ತು ಫೀಲ್ಡ್ ಮಾಡುವ ಆಟಗಾರ ಬೇಕಿತ್ತು.
ನಮ್ಮ ಟ್ಯಾಲೆಂಟ್ ಸ್ಕೌಟ್ ತಂಡ ಅವರ ಬಗ್ಗೆ ಹೆಚ್ಚು ಫೀಡ್ಬ್ಯಾಕ್ ನೀಡಿತು. ಅವರು ಜಡೇಜಾ ಸ್ಥಾನಕ್ಕೆ ನಂಬರ್ ಒನ್ ಆಟಗಾರರಾಗಿದ್ದರು. ಸಿಎಸ್ಕೆ ಟ್ರಯಲ್ಸ್ಗೂ ಬಂದಿದ್ದರು, ಅಲ್ಲಿ ಅವರ ಟ್ಯಾಲೆಂಟ್ ತಿಳಿದುಬಂತು.
ಅವರಲ್ಲಿ ವಿಶೇಷತೆ ಇದೆ ಎಂದು ಶ್ರೀಕಾಂತ್, ಶ್ರೀಧರನ್ ಶ್ರೀರಾಮ್ ಹೇಳಿದ್ದರು. ಅವರು ನಮಗೆ ಉತ್ತಮ ಬೆಟ್ ಆಗುತ್ತಾರೆ ಎಂದು ನಂಬಿದ್ದೇವೆ” ಎಂದು ವಿವರಿಸಿದ್ದಾರೆ.
ಪ್ರಶಾಂತ್ ವೀರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 112 ರನ್ (ಸ್ಟ್ರೈಕ್ ರೇಟ್ 170) ಮತ್ತು 9 ವಿಕೆಟ್ (ಎಕಾನಮಿ 6.76) ಪಡೆದಿದ್ದಾರೆ. ಇನ್ನು UP T20 ಲೀಗ್ನಲ್ಲಿ 320 ರನ್ (ಸ್ಟ್ರೈಕ್ ರೇಟ್ 155) ಗಳಿಸಿ ಗಮನ ಸೆಳೆದಿದ್ದರು.
ಭವಿಷ್ಯದ ಧೋನಿ ಕಾರ್ತಿಕ್ ಶರ್ಮಾ
19 ವರ್ಷ, ರಾಜಸ್ಥಾನದ ವಿಕೆಟ್ಕೀಪರ್-ಬ್ಯಾಟರ್ ಕಾರ್ತಿಕ್ ಶರ್ಮಾ ಕೆಳ ಕ್ರಮಾಂಕದ ಸ್ಫೋಟಕ ಬ್ಯಾಟರ್ ಜೊತೆಗೆ ವಿಕೆಟ್ ಕೀಪರ್ ಆಗಿದ್ದಾರೆ. ಧೋನಿ ನಿವೃತ್ತಿಯ ನಂತರ ತಂಡಕ್ಕೆ ವಿಕೆಟ್ ಕೀಪರ್ ಹಾಗೂ ಕೆಳ ಕ್ರಮಾಂಕದಲ್ಲಿ ಫಿನಿಷರ್ ಅಗತ್ಯವಿದೆ.
ಹಾಗಾಗಿ ಕಾರ್ತಿಕ್ರನ್ನ ನಾವು ಭವಿಷ್ಯದ ದೃಷ್ಟಿಯಿಂದ ಖರೀದಿಸಿದ್ದೇವೆ. ಮುಷ್ತಾಕ್ ಅಲಿ ಟ್ರೋಫಿಯಲ್ಲಿ 133 ರನ್ (ಸ್ಟ್ರೈಕ್ ರೇಟ್ 160)ಸೇರಿ ಒಟ್ಟಾರೆ ಟಿ20ಯಲ್ಲಿ 334 ರನ್ (ಸ್ಟ್ರೈಕ್ ರೇಟ್ 164, 28 ಸಿಕ್ಸರ್ಗಳು) ಸಿಡಿಸಿದ್ದಾರೆ.
ತಂಡದ ಸೆಟ್ಅಪ್ನಲ್ಲಿ ಹಲವು ಯುವಕರು ಬರುತ್ತಿದ್ದಾರೆ. ಎಂಎಸ್ನಂತಹ ಅನುಭವಿಗಳೊಂದಿಗೆ ಯುವ ಮತ್ತು ಅನುಭವದ ಮಿಶ್ರಣ ನಮಗೆ ಸಹಾಯ ಮಾಡುತ್ತದೆ ಎಂದು ನಂಬಿದ್ದೇವೆ.
ಟಿ20 ಕ್ರಿಕೆಟ್ನಲ್ಲಿ ಬಂದ ಬದಲಾವಣೆಗಳನ್ನು ಗಮನಿಸಿ ನಾವು ಅದಕ್ಕೆ ಹೊಂದಿಕೊಳ್ಳುತ್ತಿದ್ದೇವೆ ಎಂದು ವಿಶ್ವನಾಥನ್ ತಿಳಿಸಿದ್ದಾರೆ.
ನಾವು ಯಾವಾಗಲೂ ಪ್ರೋಸೆಸ್ ಅನುಸರಿಸುತ್ತೇವೆ, ಆಟಗಾರರ ಮೇಲೆ ಒತ್ತಡ ಹಾಕುವುದಿಲ್ಲ. ಅವರು ತಂಡಕ್ಕೆ ಹೊಂದಿಕೊಂಡು ಉತ್ತಮವಾಗಿ ಪ್ರದರ್ಶನ ನೀಡುತ್ತಾರೆ ಎಂದು ನಂಬಿದ್ದೇವೆ ಎಂದು ಯುವ ಆಟಗಾರರ ಖರೀದಿಯನ್ನ ಸಮರ್ಥಿಸಿಕೊಂಡಿದ್ದಾರೆ.
ಸಿಎಸ್ಕೆ ಖರೀದಿಸಿದ ಆಟಗಾರರು
- ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್, ಬೌಲರ್) – ರೂ. 2 ಕೋಟಿ
- ಪ್ರಶಾಂತ್ ವೀರ್ (ಭಾರತ, ಆಲ್-ರೌಂಡರ್) – ರೂ. 14.20 ಕೋಟಿ
- ಕಾರ್ತಿಕ್ ಶರ್ಮಾ (ಭಾರತ, ಆಲ್-ರೌಂಡರ್) – ರೂ. 14.20 ಕೋಟಿ
- ಮ್ಯಾಥ್ಯೂ ಶಾರ್ಟ್ (ಆಸ್ಟ್ರೇಲಿಯಾ, ಆಲ್-ರೌಂಡರ್) – ರೂ. 1.50 ಕೋಟಿ
- ಅಮನ್ ಖಾನ್ (ಭಾರತ, ಆಲ್-ರೌಂಡರ್) – ರೂ. 40 ಲಕ್ಷ
- ಸರ್ಫರಾಜ್ ಖಾನ್ (ಭಾರತ, ಬ್ಯಾಟರ್) – ರೂ. 75 ಲಕ್ಷ



