‘ಗೃಹಲಕ್ಷ್ಮಿ’ ಜಟಾಪಟಿ; ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ನಿಂತು ಸಿಎಂ ಇಲಾಖೆಯನ್ನೇ ದೂರಿದ ಡಿಕೆ ಶಿವಕುಮಾರ್!
ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಸಂಬಂಧವಾಗಿ ವಿಧಾನಸಭೆ ಅಧಿವೇಶನದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿರೋಧ ಪಕ್ಷಗಳ ತೀವ್ರ ಟೀಕೆಗೆ ಗುರಿಯಾಗಿದ್ದರು. ಈ ವಿಚಾರವಾಗಿ ಇಂದು (ಡಿ.17) ಅವರು ಸದನದಲ್ಲೇ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಪ್ಪುಗಳನ್ನು ಸರಿಪಡಿಸಿಕೊಂಡು ಜವಾಬ್ದಾರಿಯಿಂದ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಆದರೆ ಸಚಿವೆಯ ಈ ಸ್ಪಷ್ಟನೆಗೆ ತೃಪ್ತಿಯಾಗದ ವಿರೋಧ ಪಕ್ಷದ ನಾಯಕರು ಸರ್ಕಾರದ ಮೇಲೆ ತೀವ್ರವಾಗಿ ದಾಳಿ ನಡೆಸಿದರು.
ಸಿಎಂ ಖಾತೆಯಿಂದಲೇ ಹಣ ಬಂದಿಲ್ಲ
ಸದನದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣದ ವಿಚಾರವಾಗಿ ಗದ್ದಲ ಜೋರಾಗುತ್ತಿದ್ದಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಧ್ಯಪ್ರವೇಶ ಮಾಡಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪರವಾಗಿ ನಿಂತರು.
ಈ ವೇಳೆ ಅವರು ಹಣದ ವ್ಯತ್ಯಾಸಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರಣವಲ್ಲ, ಬದಲಾಗಿ ಹಣಕಾಸು ಇಲಾಖೆಯೇ ಹಣ ಬಿಡುಗಡೆ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಹಣಕಾಸು ಖಾತೆಯನ್ನು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ, ಡಿಕೆ ಶಿವಕುಮಾರ್ ಅವರು ಪರೋಕ್ಷವಾಗಿ ಸಿಎಂ ಇಲಾಖೆಯನ್ನೇ ದೂರಿದಂತಾಯಿತು.
ಸಿಎಂ ಖಾತೆಯನ್ನೇ ದೂರಿದ ಡಿಕೆಶಿ
ಫೈನಾನ್ಸ್ ಡಿಪಾರ್ಟ್ಮೆಂಟ್ನವರು ಹಣ ಕೊಡದೇ ಇದ್ದರೆ ಸಚಿವರು ಏನು ಮಾಡಬಲ್ಲರು ಎಂದು ಡಿಕೆ ಶಿವಕುಮಾರ್ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ರಕ್ಷಿಸುವ ಉದ್ದೇಶದಿಂದ ಮಾತನಾಡಿದ ಅವರು, ಯೋಜನೆಯ ಹಣ ಬಿಡುಗಡೆ ವಿಳಂಬಕ್ಕೆ ಸಚಿವೆಯ ಮೇಲೆ ಹೊಣೆ ಹಾಕುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟರು. ಈ ಮಾತುಗಳು ಸದನದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾದವು.
ರಾಜ್ಯದ ಮಹಿಳೆಯರಿಗೆ ಕ್ಷಮೆ ಕೇಳ್ತೀರಾ?
ಈ ನಡುವೆ ಬಿಜೆಪಿ ನಾಯಕ ಸುರೇಶ್ ಕುಮಾರ್ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, “ರಾಜ್ಯದ ಮಹಿಳೆಯರಿಗೆ ನೀವು ಕ್ಷಮೆ ಕೇಳುತ್ತೀರಾ?” ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ, “ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದೆ ಎಂದಾದರೆ ವಿಷಾದಿಸುತ್ತೇನೆ. ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಯೋಜನೆಯಡಿ 54 ಸಾವಿರ ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ” ಎಂದು ಸ್ಪಷ್ಟಪಡಿಸಿದರು. ಆದರೂ ವಿರೋಧ ಪಕ್ಷ ತೃಪ್ತರಾಗದಿದ್ದರೆ, ರಾಜ್ಯದ ಮಹಿಳೆಯರ ಮುಂದೆ ಕ್ಷಮೆ ಕೇಳಲು ಸಿದ್ಧವಿರುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಕ್ಷಮೆ ಕೇಳೋಕು ರೆಡಿ ಎಂದ ಲಕ್ಷ್ಮಿ ಹೆಬ್ಬಾಳ್ಕರ್
ಸಚಿವೆ ತಮ್ಮ ವಿರುದ್ಧ ನಡೆಯುತ್ತಿರುವ ಟೀಕೆಯನ್ನು ಮಹಿಳೆಯಾಗಿ ತಗ್ಗಿಸುವ ಪ್ರಯತ್ನವೆಂದು ಉಲ್ಲೇಖಿಸಿದಾಗ, ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಸಹ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಕ್ಕೆ ನಿಂತರು.
ಒಬ್ಬ ಮಹಿಳಾ ಸಚಿವೆಯ ಮೇಲೆ ಈ ರೀತಿ ಮುಗಿಬೀಳುವುದು ಸರಿಯಲ್ಲ ಎಂದು ಅವರು ಸದನದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಮೂಲಕ ಗೃಹಲಕ್ಷ್ಮಿ ಯೋಜನೆ, ಹಣಕಾಸು ನಿರ್ವಹಣೆ ಮತ್ತು ಸರ್ಕಾರದ ಒಳಾಂಗಣ ಭಿನ್ನಾಭಿಪ್ರಾಯಗಳು ವಿಧಾನಸಭೆಯಲ್ಲಿ ಭಾರೀ ಚರ್ಚೆಗೆ ಕಾರಣವಾದವು.



